ಅಣು 2
	
ಜೈನ ಸಿದ್ಧಾಂತದ ಪ್ರಕಾರ ಉತ್ಪತ್ತಿ, ಸ್ಥಿತಿ, ವಿನಾಶ ಈ ಮೂರು ಸ್ವಭಾವಗಳಿಂದ ಕೂಡಿದ ಅಜೀವತತ್ತ್ವದ ಅತಿಸೂಕ್ಷ್ಮ ಭಾಗಗಳಾದ ಕೆಲವು ಪರಮಾಣುಗಳು ಸೇರಿ ಅಣುಗಳು ರೂಪುಗೊಂಡಿವೆ. ಇಂಥ ಹಲವು ಅಣುಗಳು ಸೇರಿದಾಗ ಪುದ್ಗಲ ಸ್ಕಂಧ ಸಿದ್ಧವಾಗುತ್ತದೆ. ಈ ಪುದ್ಗಲ ಪರಮಾಣುಗಳಲ್ಲಿ ಗಮನಾಗಮನ ಕ್ರಿಯೆ ಇದೆ. ಪುದ್ಗಲ ಪರಮಾಣುಗಳು ಒಂದಕ್ಕೊಂದು ಸೇರುವುದು ಸಂಘಾತ. ಪುದ್ಗಲ ಸ್ಕಂಧ ಒಡೆದು ಅಣುಗಳು ಚದರುವುದೇ ಭೇದ. ಈ ಸಂಘಾತಭೇದಗಳು ಪುದ್ಗಲ ಅಣುವಿನ ಸ್ನಿಗ್ಧಋಕ್ಷ ಸ್ವಭಾವದಿಂದ ಉಂಟಾಗುತ್ತದೆ. ಸ್ಕಂಧ ಒಡೆದು ಚದುರಿದ ಪುದ್ಗಲ ಪರಮಾಣುಗಳು ಅದೃಶ್ಯವಾಗಿರುತ್ತವೆ. ಆದ್ದರಿಂದಲೇ ಪುದ್ಗಲ ಅದೃಷ್ಟವೆಂದು ಜೈನಾಗಮಗಳಲ್ಲಿ ಹೇಳಿದೆ. ಇವುಗಳನ್ನು ಸೂಕ್ಷ್ಮದರ್ಶಕ ಯಂತ್ರದಿಂದಲೂ ಕಾಣಲಿಕ್ಕೆ ಸಾಧ್ಯವಿಲ್ಲ. ಈ ಪುದ್ಗಲಾಣುಗಳು ಜೀವಾಣುಗಳೊಡನೆ ಸೇರಿದಾಗ, ಭೌತವಸ್ತುಗಳು ಉತ್ಪನ್ನವಾಗುತ್ತವೆ. ಈ ಪ್ರತಿಯೊಂದು ಭೌತವಸ್ತುವೂ ಸಾಮಾನ್ಯವಾಗಿ ತನ್ನ ಲಕ್ಷಣವನ್ನು ಕಳೆದುಕೊಳ್ಳದೆ, ಬೇರೆ ಬೇರೆ ಪುದ್ಗಲ ಸ್ಕಂಧಗಳೊಡನೆ ಸಂಪರ್ಕ ಬೆಳೆಸಿ, ತನ್ನ ಶಕ್ತಿಯನ್ನೂ ಅಸ್ತಿತ್ವವನ್ನೂ ಪ್ರಕಟಿಸುತ್ತದೆ. ಇದರಿಂದ ವೈಚಿತ್ರ್ಯಪೂರ್ಣವಾದ ಈ ಸೃಷ್ಟಿ ರೂಪುಗೊಂಡಿದೆ. 
	
ಅಜೀವತತ್ತ್ವದಲ್ಲಿ ಪುದ್ಗಲ, ಧರ್ಮ, ಅಧರ್ಮ, ಆಕಾಶ ಮತ್ತು ಕಾಲ ಎಂದು ಐದು ವಿಧಗಳು. ಪುದ್ಗಲಾಣು ಮೂರ್ತಿತ್ವವಿದೆ. ರೂಪ, ರಸ, ಗಂಧ ಹಾಗೂ ಸ್ಪರ್ಶದಿಂದ ನಮಗೆ ಇದರ ಅರಿವು ಆಗುತ್ತದೆ. ಪುದ್ಗಲಾಣು ಜೀವಾಣುವಿನೊಡನೆ ಸೇರಿದಾಗ ಆಗುವ ಕರ್ಮಾಣುವನ್ನು ಒಂದು ದ್ರವ್ಯವೆಂದು ಸ್ವೀಕರಿಸಿದ್ದು ಜೈನದರ್ಶನದ ವೈಶಿಷ್ಟ್ಯ. 
	
ಅಣುಸ್ಕಂಧ, ಅಣು, ಪರಮಾಣು ಇವು ಪುದ್ಗಲದ್ರವ್ಯದ ಸೂಕ್ಷ್ಮಾತಿಸೂಕ್ಷ್ಮತರ ಭಾಗಗಳು.			    
 (ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ